ಮಾರ್ಷಲ್ ಯೋಜನೆ -
ಎರಡನೆಯ ಮಹಾಯುದ್ಧದ ಪರಿಣಾಮದಿಂದಾಗಿ ಯೂರೋಪಿನ ಅನೇಕ ದೇಶಗಳು ಕಷ್ಟಕ್ಕೊಳಗಾಗಿದ್ದವು. ಆ ದೇಶಗಳ ಕಷ್ಟ ನಿವಾರಣೆಗೆ, ಆರ್ಥಿಕ ಸ್ಥಿತಿಯ ಪುನಶ್ಚೇತನಕ್ಕೆ ಅಮೆರಿಕ ಸಂಯುಕ್ತ ಸಂಸ್ಥಾನಗಳು ನೀಡಿದ ಆರ್ಥಿಕ ನೆರವಿನ ಯೋಜನೆ. ಆಗ ಅಮೆರಿಕದ ವಿದೇಶಾಂಗ ಸಚಿವರಾಗಿದ್ದ (ಸೆಕ್ರೆಟರಿ ಆಫ್ ಸ್ಪೇಟ್) ಜನರಲ್ ಜಿ.ಪಿ. ಮಾರ್ಷಲರಿಂದಾಗಿ ಯೋಜನೆಗೆ ಈ ಹೆಸರು ಬಂದಿದೆ. ಯೂರೋಪಿನ ಪುನವ್ರ್ಯವಸ್ಥೆ ಬಗ್ಗೆ ಚಿಂತನೆ, ಸಮಾಲೋಚನೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮಾರ್ಷಲ್ ಹಾರ್ವರ್ಡ್ ವಿಶ್ವ ವಿದ್ಯಾಲಯದಲ್ಲಿ 1947ರ ಜೂನ್ 5 ರಂದು ಮಾಡಿದ ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ. ಇದರ ಪ್ರಕಾರ ಅಮೆರಿಕ, ಕೆಲವು ಷರತ್ತುಗಳ ಮೇಲೆ ಯೂರೋಪಿನ ಪುನವ್ರ್ಯವಸ್ಥೆಗೆ ವಿಶೇಷ ಆರ್ಥಿಕ ಸಹಾಯ ನೀಡಲು ಮುಂದೆ ಬಂತು. ಐರೋಪ್ಯ ರಾಷ್ಟ್ರಗಳು ಒಂದುಗೂಡಿ ಅವುಗಳ ಅವಶ್ಯಕತೆಗಳನ್ನೂ ಇವುಗಳ ಪೂರೈಕೆಗೆ ವೈಯಕ್ತಿಕವಾಗಿಯೂ ಪರಸ್ಪರವಾಗಿಯೂ ವಹಿಸುವ ಪಾತ್ರವನ್ನೂ ಸ್ಪಷ್ಟಪಡಿಸಬೇಕೆಂಬುದೇ ಮುಖ್ಯ ಷರತ್ತು. ಈ ರೀತಿ ಮಾಡಿದರೆ ಅಮೆರಿಕ ಆ ರಾಷ್ಟ್ರಗಳಿಗೆ ಆದಷ್ಟು ಉದಾರ ಪ್ರಮಾಣದಲ್ಲಿ ಸಹಾಯ ನೀಡುವ ಭರವಸೆಯನ್ನು ಮಾರ್ಷಲ್ ಅವರ ಘೋಷಣೆ ಒಳಗೊಂಡಿತ್ತು. ಹೀಗೆ ಸ್ವಸಹಾಯ, ಪರಸ್ಪರ ಸಹಾಯ ಮತ್ತು ಅಮೆರಿಕದ ಸಹಾಯದ ಆಧಾರದ ಮೇಲೆ ಐರೋಪ್ಯ ರಾಷ್ಟ್ರಗಳ ಆರ್ಥಿಕ ಪುನವ್ರ್ಯವಸ್ಥೆಗಾಗಿ ಈ ಕಾರ್ಯಕ್ರಮ ರಚಿತವಾಯಿತು.

ಮಾರ್ಷಲ್ ಯೋಜನೆಯ ಪ್ರಯೋಜನ ಪಡೆಯುವ ಉದ್ದೇಶವನ್ನು ಚರ್ಚೆ ಮಾಡುವ ಸಲುವಾಗಿ ಬ್ರಿಟಿಷ್ ಸರ್ಕಾರ ಯೂರೋಪಿನ ರಾಷ್ಟ್ರಗಳೆಲ್ಲವನ್ನೂ ಒಂದು ಸಮ್ಮೇಳನಕ್ಕೆ ಆಹ್ವಾನಿಸಿತು. ಸೋವಿಯತ್ ದೇಶ ಹಾಗೂ ಇತರ ಸಮಾಜವಾದಿ ರಾಷ್ಟ್ರಗಳನ್ನು ಇಟ್ಟು ಉಳಿದ 17 ಐರೋಪ್ಯ ರಾಷ್ಟ್ರಗಳು ಈ ಆಹ್ವಾನವನ್ನು ಮನ್ನಿಸಿ ಪ್ಯಾರಿಸ್ಸಿನಲ್ಲಿ ಸಭೆ ಸೇರಿ 1948ರ ಏಪ್ರಿಲ್ 16 ರಂದು ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದದ ಆಧಾರದ ಮೇಲೆ ಅನಂತರ ಕೈಗೊಳ್ಳಲಾದ ಕ್ರಮಗಳೇ ನಾಲ್ಕು ವರ್ಷಗಳ (1948-52) ಅವಧಿಯ ಮಾರ್ಷಲ್ ಯೋಜನೆಯಾಗಿ ರೂಪುಗೊಂಡು ಜಾರಿಗೆ ಬಂತು.

ಇದರಿಂದಾಗಿ ಸದಸ್ಯ ರಾಷ್ಟ್ರಗಳ ಮಧ್ಯೆ ನಿಕಟವಾದ ಬಾಂಧವ್ಯ ಬೆಳೆಸಲು ಸಹಾಯವಾಯಿತು. ಅಮೆರಿಕ ನೀಡಿದ ಆರ್ಥಿಕ ಸಹಾಯವನ್ನು ಯುಕ್ತ ರೀತಿಯಲ್ಲಿ ಹಂಚುವುದು, ಸದಸ್ಯ ರಾಷ್ಟ್ರಗಳೊಳಗೆ ವಿದೇಶಿ ವ್ಯಾಪಾರ ಹಾಗೂ ವಿನಿಮಯ ಸಲೀಸಾಗಿ ನಡೆಯುವಂತೆ ಏರ್ಪಾಡು ಮಾಡುವುದು. ಮಾರ್ಷಲ್ ಯೋಜನೆಗೆ ಸಂಬಂಧಿಸಿದ ಇತರ ಕಾರ್ಯಾಚರಣೆಗಳನ್ನು ನೋಡಿಕೊಳ್ಳುವುದು ಮತ್ತು ಯೂರೋಪಿನ ರಾಷ್ಟ್ರಗಳ ಆರ್ಥಿಕ ಸಂಘಟನೆ ಸಾಧಿಸುವುದು-ಇವು ಈ ಸಂಸ್ಥೆಯ ಮುಖ್ಯೋದ್ದೇಶಗಳಾಗಿದ್ದವು.

ಅಮೆರಿಕದ ಸರ್ಕಾರ ಐರೋಪ್ಯ ಪುನರುಜ್ಜೀವನ ಕಾರ್ಯಕ್ರಮ ಮಸೂದೆಯೊಂದನ್ನು ಅಂಗೀಕರಿಸಿ ಇದರ ಪ್ರಕಾರ ಮಾರ್ಷಲ್ ಯೋಜನೆಯನ್ನು ಜಾರಿಗೆ ತರುವುದಕ್ಕಾಗಿ ಆರ್ಥಿಕ ಸಹಕಾರ ಆಡಳಿತ ವ್ಯವಸ್ಥೆಯೊಂದನ್ನು ಸ್ಥಾಪಿಸಿತು. ಈ ಸಂಸ್ಥೆ ವಾಷಿಂಗ್‍ಟನ್ನಿನಲ್ಲಿ ತನ್ನ ಕೇಂದ್ರ ಕಛೇರಿಯನ್ನೂ ಪ್ಯಾರಿಸ್‍ನಲ್ಲಿ ಒಂದು ಕೇಂದ್ರೀಯ ಐರೋಪ್ಯ ಕಛೇರಿಯನ್ನೂ ಪ್ರತಿ ಸದಸ್ಯರಾಷ್ಟ್ರದಲ್ಲಿಯೂ ಪ್ರತಿನಿಧಿಯನ್ನೂ ಹೊಂದಿತ್ತು.

ಮಾರ್ಷಲ್ ಯೋಜನೆ ಹೀಗೆ ಐರೋಪ್ಯ ಸಹಕಾರ ಹಾಗೂ ಯೋರೋಪ್ ಅಮೆರಿಕ ಬಾಂಧವ್ಯ ಬೆಳೆಸುವಂಥ ವಿಶೇಷ ಸಾಂಸ್ಥಿಕ ಏರ್ಪಾಡುಗಳಿಗೆ ಕಾರಣವಾಯಿತು.

ಮಾರ್ಷಲ್ ಯೋಜನೆಗೆ ಸೇರಿದ ಪ್ರತಿರಾಷ್ಟ್ರವೂ 1948-52ರ ಅವಧಿಯ ನಾಲ್ಕು ವರ್ಷಗಳ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿತು. 1952ರ ವೇಳೆಗೆ ವರಮಾನದ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸಿಕೊಂಡು ತರುವಾಯ ಈ ವರಮಾನದ ಹೆಚ್ಚುವರಿಯನ್ನು ಮಾರ್ಷಲ್ ಸಹಾಯದಂಥ ವಿಶೇಷ ಸಹಾಯವಿಲ್ಲದೆಯೇ ಸಾಧಿಸುವುದು ಈ ಯೋಜನೆಗಳ ಮುಖ್ಯ ಉದ್ದೇಶವಾಗಿತ್ತು. ಉತ್ಪನ್ನ, ವರಮಾನ ಮತ್ತು ರಫ್ತು ಇವುಗಳ ಏರಿಕೆ ಬಗ್ಗೆ ನಿರ್ದಿಷ್ಟ ಗುರಿಗಳ ನಿಗದಿ, ಕಾರ್ಮಿಕಬಲದ ಉತ್ಪಾದನ ಶಕ್ತಿಯನ್ನು ಹೆಚ್ಚಿಸುವುದು, ಬಂಡವಾಳ ಸರಕಿನ ಪೂರ್ಣ ಉಪಯೋಗ, ಕೈಗಾರಿಕಾ ವಿಧಾನದ ಆಧುನೀಕರಣ, ಸಾರಿಗೆ ಸಂಪರ್ಕ ಸುಧಾರಣೆ, ಬಜೆಟ್ಟು ಸಮತೋಲನ ಹಾಗೂ ಹಣದ ಸ್ಥಿರತೆ ಇವು ಎಲ್ಲ ರಾಷ್ಟ್ರಗಳ ಯೋಜನೆಗಳಲ್ಲಿ ಅಡಕವಾಗಿದ್ದ ಆಂತರಿಕ ರೀತಿನೀತಿಗಳ ಮುಖ್ಯ ಅಂಶಗಳು.

ಸದಸ್ಯರಾಷ್ಟ್ರಗಳೊಳಗೆ ಪರಸ್ಪರ ಸಹಾಯ ಹಾಗೂ ಸಹಕಾರ ಕ್ರಮಗಳು ಮಾರ್ಷಲ್ ಯೋಜನೆಯ ಇನ್ನೊಂದು ಮುಖ್ಯ ಭಾಗವಾಗಿದ್ದು ಆರ್ಥಿಕ ಸಂಘಟನೆಗೆ ಈ ಯೋಜನೆ ಮಾರ್ಗ ಮಾಡಿತೆಂದು ಹೇಳಬಹುದು. ಪರಸ್ಪರ ಸುಂಕ ಇಳುವರಿ, ವಿದೇಶಿ ವಿನಿಮಯ ನಿರ್ಬಂಧಗಳ ನಿರ್ಮೂಲನ, ಸದಸ್ಯರಾಷ್ಟ್ರಗಳೊಳಗೆ ಸಲೀಸಾಗಿ ಸಂಚರಿಸಲು ಅವಕಾಶ ಇತ್ಯಾದಿ ಕ್ರಮಗಳನ್ನೂ ಸದಸ್ಯರಾಷ್ಟ್ರಗಳು ಕೈಗೊಂಡಿದುದರಿಂದ ಆ ಎಲ್ಲ ರಾಷ್ಟ್ರೀಯ ಅರ್ಥವ್ಯವಸ್ಥೆಗಳು ಆರ್ಥಿಕ ಶಕ್ತಿಗಳ ಆಧಾರದ ಮೇಲೆ ಒಂದುಗೂಡಲು ಸಾಧ್ಯವಾಯಿತು. ಅಮೆರಿಕ ನೀಡಿದ ಧನಸಹಾಯವನ್ನು ಸದಸ್ಯ ರಾಷ್ಟ್ರಗಳು ಯಾವ ಭಿನ್ನಾಭಿಪ್ರಾಯವೂ ಇಲ್ಲದೇ ಹಂಚಿಕೊಂಡರು. ಆ ರಾಷ್ಟ್ರಗಳು ಹೊಂದಿದ್ದ ಅನ್ಯೋನ್ಯತಾ ಭಾವನೆಯನ್ನು ಪ್ರದರ್ಶಿಸುತ್ತವೆ.

ಅಮೆರಿಕ ಮಾರ್ಷಲ್ ನೆರವನ್ನು ಸಾಲ ಹಾಗೂ ಅನುದಾನ ರೂಪದಲ್ಲಿ ನೀಡಿತು. ಬಹುಭಾಗ ದಾನರೂಪದಲ್ಲಿದ್ದುದರಿಂದ ಯೂರೋಪಿನ ರಾಷ್ಟ್ರಗಳಿಗೆ ವಿಶೇಷವಾದ ಸಹಾಯವಾಯಿತು. ಈ ಯೋಜನೆಯ ಪ್ರಕಾರ ಅಮೆರಿಕ ಐರೋಪ್ಯ ರಾಷ್ಟ್ರಗಳಿಗೆ ಒಟ್ಟು 1,316 ಕೋಟಿ ಡಾಲರುಗಳನ್ನು ನೀಡಿತು. ಜೊತೆಗೆ ಪರಸ್ಪರ ರಕ್ಷಣಾ ಸಹಾಯ ಮತ್ತು ಪರಸ್ಪರ ಭದ್ರತಾಕಾರ್ಯಕ್ರಮಕ್ಕೆ ಅನುಗುಣವಾಗಿ 1950-51 ಮತ್ತು 1951-53 ರಲ್ಲಿ ಒಟ್ಟು 988 ಕೋಟಿ ಡಾಲರುಗಳ ನೆರವನ್ನು ಮಾರ್ಷಲ್ ಯೋಜನೆಯ ರಾಷ್ಟ್ರಗಳಿಗೆ ಅಮೆರಿಕ ಒದಗಿಸಿತು. ಹೀಗೆ ನಾಲ್ಕು ವರ್ಷಗಳಲ್ಲಿ ಒಟ್ಟು 2,304 ಕೋಟಿ ಡಾಲರುಗಳಷ್ಟು ಸರಕುಸೇವೆಗಳನ್ನು ಒದಗಿಸಿ ಆ ರಾಷ್ಟ್ರಗಳು ಚೇತರಿಸಿಕೊಳ್ಳಲು ಅಮೆರಿಕ ಸಹಾಯ ಮಾಡಿತು. 

ಮಾರ್ಷಲ್ ಯೋಜನೆಯ ಕಾರ್ಯಾಚರಣೆಗಳಿಂದ ಐರೋಪ್ಯ ರಾಷ್ಟ್ರಗಳಿಗೆ ಅನೇಕ ವಿಧದಲ್ಲಿ ಪ್ರಯೋಜನ ಉಂಟಾಯಿತು. ಮಹಾಯುದ್ಧದ ದೆಸೆಯಿಂದ ಶೇಕಡಾ ಸುಮಾರು 15-20ರಷ್ಟು ನಾಶವಾಗಿದ್ದ ಬಂಡವಾಳ ಸರಕನ್ನು ಭರ್ತಿ ಮಾಡಿದುದಷ್ಟೇ ಅಲ್ಲದೇ ಇನ್ನೂ ಹೆಚ್ಚಿನ ಬಂಡವಾಳ ಅಭಿವೃದ್ಧಿಗೆ ಕಾರಣವಾದುವು. ಕುಸಿದು ಬಿದ್ದಿದ್ದ ಕೃಷಿ ಹಾಗೂ ಕೈಗಾರಿಕಾ ವ್ಯವಸ್ಥೆಗಳು ಹೊಸ ದಕ್ಷತೆ ಪಡೆದವು. ಹಣಕಾಸು ವ್ಯವಸ್ಥೆಯೂ ವಿದೇಶಿ ಪಾವತಿ ಪರಿಸ್ಥಿತಿಯನ್ನು ಸುಧಾರಿಸಿದವು. ವಸಾಹತುಗಳು ಮತ್ತು ಅಧೀನ ರಾಷ್ಟ್ರಗಳನ್ನು ಹೊಂದಿದ್ದ ಐರೋಪ್ಯ ರಾಷ್ಟ್ರಗಳು ತಮ್ಮ ಘನತೆಗೆ ಉಂಟಾದ ಧಕ್ಕೆಯಿಂದ ಪಾರಾಗಿ ಪುನಃ ತಲೆ ಎತ್ತುವಂತಾಯಿತು. ಹೀಗೆ ಮಾರ್ಷಲ್ ಯೋಜನೆ ಕೇವಲ ಪುನವ್ರ್ಯವಸ್ಥೆಯ ರಚನೆಗೆ ತಳಹದಿಯನ್ನು ಹಾಕಿತೆನ್ನಬಹುದು.

ಮಾರ್ಷಲ್ ಯೋಜನೆಯಿಂದ ಅಮೆರಿಕದ ಆರ್ಥಿಕತೆಗೆ ಆದ ಪ್ರಯೋಜನವನ್ನೂ ಮರೆಯುವಂತಿಲ್ಲ. ಮೊದಲನೆಯ ಮಹಾಯುದ್ಧವಾದಾಗಿನಿಂದ ಅಮೆರಿಕ ಸ್ವಂತ ದೇಶದ ಬೇಡಿಕೆಗೆ ಮಿಗಿಲಾದ ಪ್ರಮಾಣದಲ್ಲಿ ಸರಕುಗಳನ್ನು ಉತ್ಪಾದಿಸತೊಡಗಿತ್ತು. ಈ ಹೆಚ್ಚಿನ ಉತ್ಪನ್ನಕ್ಕೆ ರಫ್ತು ಮಾರುಕಟ್ಟೆ ಹಿಡಿಯಬೇಕಾದ್ದು ಅತ್ಯಾವಶ್ಯವಾಗಿತ್ತು. ಏಕೆಂದರೆ ಉತ್ಪಾದನೆಯನ್ನು ಕಡಿಮೆ ಮಾಡುವ ಮಾರ್ಗ ಕೈಗೊಂಡರೆ ಆ ದೇಶ ನಿರುದ್ಯೋಗ ಅನುಭವಿಸಬೇಕಾಗುತ್ತಿತ್ತು. ಯುದ್ಧೋತ್ತರ ಪರಿಸ್ಥಿತಿಯಲ್ಲಿ ಐರೋಪ್ಯ ರಾಷ್ಟ್ರಗಳಿಗೆ ಸರಕುಗಳ ಅವಶ್ಯಕತೆ ಎಷ್ಟೇ ಇದ್ದಾಗ್ಯೂ ಕೊಳ್ಳುವ ಶಕ್ತಿ ಕ್ಷೀಣಿಸಿದ್ದುದರಿಂದ ವಿದೇಶಿ ಸರಕುಗಳನ್ನು ಅವು ಕೊಳ್ಳುವಂತಿರಲಿಲ್ಲ. ಈ ಸಂದರ್ಭದಲ್ಲಿ ಮಾರ್ಷಲ್ ನೆರವು ಅಮೆರಿಕದ ಸರಕು ಸೇವೆಗಳಿಗೆ ಐರೋಪ್ಯ ರಾಷ್ಟ್ರಗಳ ಬೇಡಿಕೆಯನ್ನು ಒದಗಿಸಿದಂತಾಯಿತು. ಇದರಿಂದ ಅಮೆರಿಕದ ಅರ್ಥವ್ಯವಸ್ಥೆ ಉನ್ನತ ಉದ್ಯೋಗ ಹಾಗೂ ಉತ್ಪಾದನೆಯ ಮಟ್ಟಗಳನ್ನು ಕಾಪಾಡಿಕೊಂಡು ಬರಲು ಅನುಕೂಲವಾಯಿತು. ಹೀಗೆ ಐರೋಪ್ಯ ಪುನರುಜ್ಜೀವನಕ್ಕೆ ಒಂದು ವಿಶೇಷ ಕಾಣಿಕೆಯಾದ ಮಾರ್ಷಲ್ ಯೋಜನೆ ಅಮೆರಿಕದ ಹಿತಾಸಕ್ತಿಗಳೂ ಅನುಗುಣವಾಗಿತ್ತು.

ಅಭಿವೃದ್ಧಿಶೀಲ ದೇಶಗಳಿಗೆ ಇದೇ ರೀತಿಯ ನೆರವಿನ ಆವಶ್ಯಕತೆ ಐರೋಪ್ಯ ರಾಷ್ಟ್ರಗಳಿಗೆ ಇದ್ದಷ್ಟೇ ತೀವ್ರವಾಗಿದ್ದಾಗ್ಯೂ ಮಾರ್ಷಲ್ ನೆರವಿಗೆ ಅಮೆರಿಕ ಐರೋಪ್ಯ ರಾಷ್ಟ್ರಗಳನ್ನೇ ಚುನಾಯಿಸಿಕೊಂಡಿತ್ತೆಂದು ಟೀಕಿಸಲಾಗಿದೆ. ಈ ಪ್ರಶ್ನೆಗೆ ಎರಡು ಸಮಾಧಾನಗಳಿವೆ : ಒಂದು ರಾಜಕೀಯ, ಇನ್ನೊಂದು ಆರ್ಥಿಕ. ಯುದ್ಧ ಹಾಗೂ ಯುದ್ಧೋತ್ತರ ಕಾಲದಲ್ಲಿ ಯೂರೋಪಿನ ರಾಷ್ಟ್ರಗಳಲ್ಲೂ ಕಮ್ಯೂನಿಸಮ್ ಪ್ರಭಾವ ಹೆಚ್ಚುತ್ತಿತ್ತು. ಈ ಪ್ರವೃತ್ತಿಯನ್ನು ತಡೆಗಟ್ಟುವುದು ಅಮೆರಿಕದ ವಿದೇಶಿ ನೀತಿಯ ಮುಖ್ಯ ಉದ್ದೇಶವಾಗಿತ್ತು. ಆರ್ಥಿಕವಾಗಿ ಐರೋಪ್ಯದೇಶಗಳು ಉನ್ನತ ಕೈಗಾರಿಕಾ ಸಾಮಥ್ರ್ಯ ಹೊಂದಿದ್ದವು. ಯುದ್ಧದಿಂದ ಇದು ಕುಂಠಿತವಾಗಿತ್ತಾದರೂ ಅವುಗಳ ಕೈಗಾರಿಕಾಶಕ್ತಿಯನ್ನು ಪುನಃಶ್ಚೇತನಗೊಳಿಸುವುದು ಹಿಂದುಳಿದ ರಾಷ್ಟ್ರಗಳಲ್ಲಿ ಹೊಸದಾಗಿ ಕೈಗಾರಿಕಾ ಬಲವನ್ನು ಹುಟ್ಟಿಸುವುದಕ್ಕಿಂತ ಸುಲಭವಾಗಿಯೂ ಶೀಘ್ರವಾಗಿಯೂ ಸಿದ್ಧಿಸುವ ಕಾರ್ಯವಾಗಿತ್ತು. ಆದ್ದರಿಂದ ಪ್ರಪಂಚ ಅರ್ಥವ್ಯವಸ್ಥೆಯ ಶೀಘ್ರ ಪುನರುತ್ಥಾನ ದೃಷ್ಟಿಯಿಂದ ಮಾರ್ಷಲ್ ಸಹಾಯವನ್ನು ಐರೋಪ್ಯ ರಾಷ್ಟ್ರಗಳಿಗೆ ನೀಡಲಾಯಿತು.
(ಎ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ